ಏಕಮುಖ ಮತ್ತು ವಿಭಿನ್ನ ಮುಖ ಪ್ರಾದೇಶಿಕ ಬೆಳೆವಣಿಗೆ: ಪ್ರಾದೇಶಿಕ ಬೆಳೆವಣಿಗೆ ಏಕಮುಖವಾಗಿರುತ್ತದೆಯೋ ಅಥವಾ ವಿಭಿನ್ನ ಮುಖವಾಗಿರುತ್ತದೆಯೋ ಎಂಬ ವಿಷಯದ ಬಗೆಗಿನ ಚರ್ಚೆ ಪ್ರಾದೇಶಿಕ ಯೋಜನೆಯ ಚಿಂತನೆಯಲ್ಲಿ ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಂಡಿದೆ. ಹಿಂದುಳಿದ ಮತ್ತು ಸಂಮೃದ್ಧ ಪ್ರದೇಶಗಳ ನಡುವಿನ ವ್ಯತ್ಯಾಸ ಕಾಲಕ್ರಮೇಣ ಕಡಿಮೆಯಾಗುತ್ತದೆಯೋ ಅಥವಾ ಹೆಚ್ಚಾಗುತ್ತದೆಯೋ ಎಂಬುದು ಯೋಜಕರಲ್ಲಿ ಅಧಿಕ ಜಿಜ್ಞಾಸೆಗೊಳಪಟ್ಟ ವಿಷಯವಾಗಿದೆ. ಕೆಲವು ಪ್ರಾದೇಶಿಕ ಸಿದ್ಧಾಂತಗಳ ಪ್ರಕಾರ ಪ್ರಾದೇಶಿಕ ಅಸಮತೋಲನ ಸ್ವಯಂ ಸರಿಪಡಿಸಿಕೊಳ್ಳಲು ಸಾಧ್ಯವಿದೆಯಾದರೂ ಮಧ್ಯಸ್ಥಿಕೆಯ ಅಗತ್ಯತೆ ಅನಿವಾರ್ಯವಾಗಿದೆ.

ವಿಭಾಗೀಯ ಸಿದ್ಧಾಂತದ ಸಲಹೆಯಂತೆ ಆಂತರಿಕವಾಗಿ ವಿವಿಧ ಕ್ಷೇತ್ರಗಳ ನಡುವೆ ಸಂಪನ್ಮೂಲಗಳ ಪುನರ್ ಹಂಚಿಕೆಗೆ ವಿಪುಲ ಅವಕಾಶಗಳಿದ್ದು ಹಿಂದುಳಿದ ಕೃಷಿ ಪ್ರದೇಶಗಳಲ್ಲಿ ಸಂಮೃದ್ಧ ಪ್ರದೇಶಗಳಿಗಿಂತ ಹೆಚ್ಚಿನ ಸಂಪನ್ಮೂಲಗಳ ಪುನರ್ ಹಂಚಿಕೆ ಸಾಧ್ಯವಿರುವುದರಿಂದ ಕ್ರಮೇಣ ಪ್ರಾದೇಶಿಕ ಅಭಿವೃದ್ಧಿ ಧೃವೀಕರಣಗೊಳ್ಳುವುದಿಲ್ಲ. ಹಾಗೆಯೇ ಆಂತರಿಕ ಪ್ರಾದೇಶಿಕ ವ್ಯಾಪಾರ ಮಾದರಿಯ ಸಲಹೆಯಂತೆ ಪ್ರಾದೇಶಿಕ ತಲಾದಾಯ ಸಹ ಎಲ್ಲಾ ಪ್ರದೇಶಗಳಲ್ಲಿ ಹೆಚ್ಚಾಗುತ್ತದೆ. ಅಪವ್ಯಯ ಆರ್ಥಿಕ ಪ್ರಮಾಣ ಹೆಚ್ಚಾದಂತೆ ಸಂಮೃದ್ಧ ಪ್ರದೇಶಗಳ ಬೆಳೆವಣಿಗೆಯನ್ನು ಮಿತಗೊಳಿಸುತ್ತದೆ. ಆದರೂ ಪ್ರಾಯೋಗಿಕವಾಗಿ ಆರ್ಥಿಕ ಅಂಶಗಳ ಚಲನೆ ಕ್ಷೇತ್ರಗಳು ಮತ್ತು ಪ್ರದೇಶಗಳ ನಡುವೆ ಇಲ್ಲವಾದಾಗ ಮತ್ತು ಆರ್ಥಿಕತೆಗಳು ಸಮೃದ್ಧ ಪ್ರದೇಶಗಳ ಬೆಳೆವಣಿಗೆಯ ಮೇಲೆ ಯಾವುದೇ ಪರಿಣಾಮ ಬೀರಲಾರದಾಗ ಸಮಾನ ಪ್ರಾದೇಶಿಕ ಬೆಳೆವಣಿಗೆ ಮಿತಿಗೊಳ್ಳಬಹುದು. ಆಗ ಪ್ರಾದೇಶಿಕ ಸಮತೋಲನ ಕಾಯ್ದುಕೊಳ್ಳುವ ಉದ್ದೇಶದಿಂದ ಸೂಕ್ತ ರೀತಿಯ ನೀತಿ ನಿಯಮಗಳನ್ನು ರೂಪಸಿ ಆರ್ಥಿಕಾಂಶಗಳ ಚಾಲನೆಗೆ ಒತ್ತುಕೊಡುವುದು ಅಗತ್ಯವಾಗುತ್ತದೆ.

ಹೈರ್ಚ್‌ಮ್ಯಾನ್, ಫ್ರೀಡ್ಮನ್ ಮತ್ತು ಮಿರ್ಡಾಲ್ ಇವರುಗಳ ಬೆಳೆವಣಿಗೆ ಸಿದ್ಧಾಂತಗಳ ಪ್ರಕಾರ ಪ್ರಾದೇಶಿಕ ಬೆಳೆವಣಿಗೆ ಪ್ರಾದೇಶಿಕವಾಗಿ ಅಸಮಾನತೆಯಿಂದ ಕೂಡಿರುತ್ತದೆ. ಈ ಸಿದ್ಧಾಂತಗಳಲ್ಲಿ ಚರ್ಚಿಸಿರುವಂತೆ ಪ್ರದೇಶಗಳ ನಡುವಿನ ಬೆಳೆವಣಿಗೆ ಅಸಮಾನವಾಗಿರುತ್ತದೆ. ಉದಾಹರಣೆ ಸಹಿತ ಹೋಲಿಸಿ ನೋಡುವುದಾದರೆ ಪ್ರದೇಶ ಎ ಪ್ರದೇಶ ಬಿ ಗಿಂತ ಅತಿ ಹೆಚ್ಚು ವೇಗವಾಗಿ ಅಭಿವೃದ್ಧಿಹೊಂದುವುದು. ಏಕೆಂದರೆ ಇದು ಪ್ರಾಕೃತಿಕ ಹಾಗೂ ಮಾನವ ನಿರ್ಮಿತ ಅನುಕೂಲತೆಗಳನ್ನು ಹೊಂದಿರುವುದರಿಂದ ಭಿನ್ನಾಭಿಮುಖ ಅಥವಾ ಅಸಮಾನತೆಯ ಬೆಳೆವಣಿಗೆ ಸ್ವಯಂ ಸರಿಪಡಿಸಿಕೊಳ್ಳುವಿಕೆಯನ್ನು ಹೊಂದಿಲ್ಲದಿರಬಹುದು. ಸ್ಪಷ್ಟವಾಗಿ ಹೇಳುವುದಾದರೆ ಈ ಪ್ರಕ್ರಿಯೆ ಸಮುಚ್ಚಯಕವಾಗಿರಬಹುದಾದುದರಿಂದ ಶ್ರೀಮಂತ ಪ್ರದೇಶಗಳು ಶ್ರೀಮಂತವಾಗಿಯೂ ಮತ್ತು ಬಡತನದಿಂದ ಕೂಡಿದ ಪ್ರದೇಶಗಳು ಅತಿ ಬಡಪ್ರದೇಶಗಳಾಗಿ ಮುಂದುವರಿಯುತ್ತವೆ.

ಮಿರ್ಡಾಲ್ರವರು ಸಮುಚಾಯಕ ಕಾರಣ ವಿಧಾನಕ್ಕೆ ಸಂಬಂಧಿಸಿದಂತೆ ಚದುರಿದ ಮತ್ತು ಹಿಂತೊಳೆ ಪರಿಣಾಮಗಳನ್ನು ವಿವರಿಸಿದ್ದಾರೆ. ಚದುರುವಿಕೆ ಪರಿಣಾಮಗಳು - ಶ್ರೀಮಂತ ಮತ್ತು ಹಿಂದುಳಿದ ಪ್ರದೇಶಗಳ ನಡುವಿನ ಬೆಳೆವಣಿಗೆಯ ಅಂತರವನ್ನು ಕಡಿತಗೊಳಿಸುವುದಕ್ಕೆ ಪುರಕವಾಗಿದೆ. ಶ್ರೀಮಂತ ಪ್ರದೇಶಗಳು ಬೆಳೆದಂತೆ ಬಡತನ ಪ್ರದೇಶಗಳ ಉತ್ಪನ್ನಗಳ ಬೇಡಿಕೆ ಹೆಚ್ಚಿಸುವುದರಿಂದ ಬಡ ಪ್ರದೇಶಗಳಲ್ಲಿ ಬೇಡಿಕೆ ಹೆಚ್ಚಾಗಿ ಆ ಪ್ರದೇಶಗಳ ಬೆಳೆವಣಿಗೆಗೆ ಉತ್ತೇಜನ ಕೊಡುತ್ತವೆ.

ಹೀಗೆ ಬಡತನ ಪ್ರದೇಶಗಳಲ್ಲಿ ಉತ್ಪಾದನೆಯ ಬೇಡಿಕೆ ಹೆಚ್ಚುವುದರಿಂದ ಅಂತಹÀ ಪ್ರದೇಶಗಳಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ಸಮರ್ಥ ರೀತಿಯಲ್ಲಿ ಬಳಸುವುದರಿಂದ ಸಂಪನ್ಮೂಲಗಳು ಕಡಿಮೆ ಕೂಲಿ ವಲಯದಿಂದ ಹೆಚ್ಚಿನ ಕೂಲಿ ವಲಯಕ್ಕೂ ಹಾಗೂ ಕಡಿಮೆ ಉತ್ಪಾದನೆ ಕ್ಷೇತ್ರದಿಂದ ಹೆಚ್ಚಿನ ಉತ್ಪಾದನೆ ಕ್ಷೇತ್ರಕ್ಕೂ ಪುನರ್ ಹಂಚಿಕೆಯಾಗುತ್ತವೆ. ಅಲ್ಲದೆ ಅಪವ್ಯಯ ಆರ್ಥಿಕತೆಗಳು ಸಮೃದ್ಧ ಪ್ರದೇಶದಲ್ಲಿ ಪ್ರಾರಂಭವಾಗಬಹುದು. ಇದರಿಂದಾಗಿ ಅಭಿವೃದ್ಧಿ ಪ್ರಕ್ರಿಯೆ ಹೆಚ್ಚು ಅಭಿವೃದ್ಧಿ ಪ್ರದೇಶಗಳಿಂದ ಹಿಂದುಳಿದ ಪ್ರದೇಶಗಳಿಗೆ ಪಸರಿಸುತ್ತದೆ. ಆದರೆ ಮಿರ್ಡಾಲ್ರವರು ಹೇಳುವಂತೆ ಚದುರಿದ ಪರಿಣಾಮಗಳು ಹಿಂತೊಳೆ ಪರಿಣಾಮಗಳಿಂದ ಸ್ಥಿರವಾಗಿರುತ್ತವೆ. ನಗರ ಕೇಂದ್ರ ಭಾಗದ ಸುತ್ತಮುತ್ತ ವ್ಯವಸಾಯ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಳದಿಂದಾಗಿ ಕೇಂದ್ರ ಸಮೃದ್ಧತೆ ಹೊಂದಿದ್ದರೂ ನಗರದ ಕೇಂದ್ರೀಯ ಭಾಗದ ಸುತ್ತಲಿನ ವಸ್ತುಗಳು ಮೂಲತÀಃ ವ್ಯವಸಾಯ ವಸ್ತುಗಳಾಗಿದ್ದು ಕಡಿಮೆ ಸ್ಥಿತಿಸ್ಥಾಪಕತ್ವವುಳ್ಳ ಬೇಡಿಕೆಯಿಂದ ಕೇಂದ್ರದ ರೀತಿಯ ಸಮೃದ್ಧತೆಯು ಅನಂತರದ ಸುತ್ತಲಿನ ವ್ಯವಸಾಯ ಪ್ರದೇಶದಲ್ಲಿ ಸಿದ್ಧಿಸದಿರಬಹುದು. ಹೀಗೆ ಬಂಡವಾಳ ಮತ್ತು ಪರಿಣಿತಶ್ರಮ ಮುಂತಾದ ಆಯ್ದ ಸಂಪನ್ಮೂಲಗಳು ನಗರ ಪ್ರದೇಶಗಳಿಗೆ ಹೋಗುವುದು. ಇದು ಹಿಂದುಳಿದ ಪ್ರದೇಶದ ಬೆಳೆವಣಿಗೆಯನ್ನು ಕುಂಠಿತಗೊಳಿಸುವುದಲ್ಲದೆ ಹಿಂದುಳಿದ ಪ್ರದೇಶಗಳು ಸ್ಪರ್ಧಿಸದಂತಾಗುತ್ತವೆ.

ಕೇಂದ್ರ ಮತ್ತು ಅಂಚಿನ ಸಿದ್ಧಾಂತಗಳು ಸಂಚಿತ (ಕುಮುಲೇಟಿವ್ ಕಾಷೋಮಾನ್) ವಿಧಾನಕ್ಕೆ ಹೆಚ್ಚು ಒತ್ತು ಕೊಟ್ಟಿವೆ. ವಿಭಿನ್ನ ಪ್ರಾದೇಶಿಕ ಬೆಳೆವಣಿಗೆ ಬಗ್ಗೆ ಪರಿಜ್ಞಾನ ಪಡೆಯಲು ಸಹ ಉಪಯುಕ್ತವಾದ ಮಾಹಿತಿಯನ್ನು ಒದಗಿಸುವುದಲ್ಲದೆ, ವಿವಿಧ ಸಿದ್ಧಾಂತಗಳ ಮೂಲಾಂಶಗಳನ್ನು ಒಟ್ಟುಗೂಡಿಸಿದೆ. ನೀತಿ ನಿಯಮಗಳು ಮತ್ತು ತೊಡಕುಗಳು ಕುರಿತಂತೆ ಆರ್ಥಿಕ ಬೆಳೆವಣಿಗೆ ಕಾರ್ಯವಿಧಾನದಲ್ಲಿ ಸಾಮಾನ್ಯ ಸ್ಥಿರತೆ ಕಂಡುಬರದೆ ಇರುವುದರಿಂದ ಸರ್ಕಾರದ ಮಧ್ಯಸ್ಥಿತಿಕೆಯ ಅನಿವಾರ್ಯತೆ ಕಂಡುಬರುತ್ತದೆ.

ವಿಭಿನ್ನತೆಯನ್ನು ಹೊಂದಿರುವ ಪ್ರಾದೇಶಿಕ ಬೆಳೆವಣಿಗೆಯನ್ನು ಅನೇಕ ಸಿದ್ಧಾಂತ ತಜ್ಞರು ಬೆಂಬಲಿಸಿದ್ದಾರೆ. ಅಲ್ಲದೆ ಕೈಗಾರಿಕಾ ರಚನೆ ಮತ್ತು ನಿಯಂತ್ರಣ ಕೇಂದ್ರೀಯವಾಗಿದ್ದು ಪ್ರಾದೇಶಿಕ ಬೆಳೆವಣಿಗೆಯ ವ್ಯತ್ಯಾಸಗಳನ್ನು ವಿವರಿಸುತ್ತವೆ. ಉದಾ: ಹೊಲ್ಯಾಂಡ್ ಅವರ ಪ್ರಕಾರ ಪ್ರಾದೇಶಿಕ ಅಸಮತೋಲನಕ್ಕೆ ಪ್ರಮುಖವಾಗಿ ಬಂಡವಾಳಶಾಹಿ ಬಹುರಾಷ್ಟ್ರೀಯ ಕಂಪನಿಗಳು ಬೆಳೆಯುತ್ತಿರುವುದೇ ಕಾರಣವಾಗಿದೆ. ಹೊಲ್ಯಾಂಡ್ ಅವರು ಹೇಳುವಂತೆ ಬಹುರಾಷ್ಟ್ರೀಯ ಬಹುಉತ್ಪನ್ನ ಕಂಪನಿಗಳ ಉದ್ಯಮಗಳು ಆರ್ಥಿಕ ಕ್ಷೇತ್ರವನ್ನು ಆವರಿಸಿಕೊಂಡಿವೆ. ಈ ಉದ್ಯಮಗಳು ಮೂಲತಃ ದೇಶದಲ್ಲಿನ ಪ್ರಾದೇಶಿಕ ಅಸಮತೋಲನವನ್ನು ಮುಂದುವರಿಸುತ್ತವೆ. ಉದ್ಯಮಿಗಳು ಪ್ರಮುಖವಾಗಿ ದೇಶದ ಸಮೃದ್ಧ ಪ್ರದೇಶಗಳಲ್ಲಿ ಕೇಂದ್ರೀಕರಿಸುತ್ತಾರೆ ಮತ್ತು ಅವರಿಗೆ ವಿರುದ್ಧವಾದ ನೀತಿ ನಿಯಮಗಳನ್ನು ರೂಪಿಸಿದಲ್ಲಿ ಸಮಸ್ಯೆಗಳಿಂದ ಕೂಡಿದ ಉದ್ಯಮಿಗಳು ಇತರೆ ಪ್ರದೇಶಗಳಲ್ಲಿ ಉದ್ಯಮಗಳನ್ನು ಕೈಗೊಳ್ಳದೆ ಸರ್ಕಾರದ ನೀತಿಗಳಿಗೆ ವಿರುದ್ಧವಾಗಿ ಪ್ರತಿಭಟಿಸುವುದಲ್ಲದೆ ದೇಶವನ್ನೇ ಬಿಟ್ಟು ಹೋಗುವುದಾಗಿ ಹೇಳುತ್ತಾರೆ.

ಬಹುರಾಷ್ಟ್ರೀಯ ಕಂಪನಿಗಳು ತಮ್ಮ ಪ್ರಾಮುಖ್ಯತೆಯನ್ನು ಬೆಳೆಸಿಕೊಳ್ಳುತ್ತಿವೆ ಮತ್ತು ಕೆಲವೇ ಕೆಲವು ದೊಡ್ಡ ಕಂಪನಿಗಳು ಕೈಗಾರಿಕಾ ಕ್ಷೇತ್ರದಲ್ಲಿ ಏಕಸ್ವಾಮ್ಯತೆಯನ್ನು ಅಮೆರಿಕ, ಪಶ್ಚಿಮ ಯುರೋಪ್ಗಳಲ್ಲಿಯೂ ಪಡೆದಿವೆ.

ಕೆಲವು ಸಂಗತಿಗಳಲ್ಲಿ ಹೊಲ್ಯಾಂಡ್ರವರ ವಿಶ್ಲೇಷಣೆ ಸಮಂಜಸವಾಗಿದ್ದು ಬಹುರಾಷ್ಟ್ರೀಯ ಕಂಪನಿಗಳ ಪ್ರಾದೇಶಿಕ ಅಭಿವೃದ್ಧಿಯ ಮೇಲೆ ಸಾಕಷ್ಟು ಪ್ರಭಾವ ಬೀರಿವೆ.  ಆದರೆ ಈ ಬಗ್ಗೆ ಯನ್ನೋಪಲಸ್ ಮತ್ತು ಡುನಿಯುಂಗ್ ಅವರು ಇದಕ್ಕೆ ತದ್ವಿರುದ್ಧವಾಗಿ ಅಭಿಪ್ರಾಯವನ್ನು ಸಹ ನೀಡಿರುತ್ತಾರೆ.                    (ಡಿ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ